ಬ್ರೈಯಂಟ್, ವಿಲಿಯಮ್ ಕಲನ್	
	1794-1878. ಅಮೆರಿಕದ ಕವಿ ಮತ್ತು ಪತ್ರಿಕೋದ್ಯಮಿ. 1794 ನವೆಂಬರ್ 3ರಂದು ಮಾಸ್‍ನ ಕಮ್ಮಿಂಗ್‍ಟನ್ ಎಂಬಲ್ಲಿ ಜನಿಸಿದ. ಕಾವ್ಯಕೃಷಿಯ ಆರಂಭದಲ್ಲಿ ಈತ ಅಲೆಕ್ಸಾಂಡರ್ ಪೋಪ್ ಕವಿಯನ್ನು ಅನುಕರಸಿ, ಸ್ಕೆಚಸ್ ಆಫ್ ದಿ ಟೈಮ್ಸ್ ಎಂಬ ವಿಡಂಬನ ಕಾವ್ಯ 1808ರಲ್ಲಿ ಪ್ರಕಟಿಸಿದ. 1811ರ ಕಡೆಯ ವೇಳೆಗೆ ಥಾನಟೋಪ್‍ಸಿಸ್ ಇಂಬ ಕವಿತೆಯನ್ನು ಈತ ಸ್ವತಂತ್ರವಾಗಿ ರಚಿಸಿದನಾದರೂ ಅದು ಅಂತಿಮ ರೂಪ ಪಡೆದು 1818ರಲ್ಲಿ ಪ್ರಕಟವಾಯಿತು. ಇದು ಕವಿಗೆ ಅಪಾರ ಖ್ಯಾತಿ ತಂದುಕೊಟ್ಟತು. 1821ರಲ್ಲಿ ಪೊಯಮ್ಸ್ ಎಂಬ ಕವನ ಸಂಕಲನ ಪ್ರಕಟವಾಯಿತು. ಕವಿ ಹಾಗೂ ವಿಮರ್ಶಕನಾಗಿ ಇಂಗ್ಲಿಷ್ ರೊಮ್ಯಾಂಟಿಸಿಸಮನ್ನು ಅಮೆರಿಕನ್ ಮನೋಧರ್ಮದ ಮುನ್ನೆಲೆಯಲ್ಲಿ ವ್ಯಾಖ್ಯಾನಿಸಲು ಶ್ರಮಿಸಿದ. ನಿಸರ್ಗ, ಸಾವು, ಭೂತಕಾಲ-ಇವು ಇವನ ಕಾವ್ಯವಸ್ತುಗಳು. ಇವನ ಶೈಲಿಯಲ್ಲಿ ಸರಳತೆ, ಸಮತೂಕ ಸಂಯಮ ಕಂಡುಬರುತ್ತವೆ. ಸಹೃದಯರನ್ನು ತೀವ್ರ ಆಲೋಚನೆಗೆ ಗುರಿಪಡಿಸುವ ಕಲೆಗಾರಿಕೆ ಇವನ ಕಾವ್ಯದಲ್ಲಿ ಇಲ್ಲವಾದರೂ ತನ್ನ ಮಿತಿಯಲ್ಲಿ ಪರಿಣಾಮಬೀರುವಲ್ಲಿ ಅದು ಯಶಸ್ವಿಯಾಗಿದೆ.

	ಪತ್ರಿಕೋದ್ಯಮಿಯಾಗಿಯೂ ಬ್ರೈಯಂಟ್ ತುಂಬ ಪ್ರಸಿದ್ಧನಾದವ. 1825ರಲ್ಲಿ ನ್ಯೂಯಾರ್ಕ್ ರಿವ್ಯೂ ಪತ್ರಿಕೆಯ ಸಂಪಾದಕನಾಗಿ ಸೇರಿದ ಈತ 1827ರಲ್ಲಿ ನ್ಯೂಯಾರ್ಕ್ ಈವ್‍ನಿಂಗ್ ಪೋಸ್ಟ್ ಪತ್ರಿಕೆಗೆ ಸಹಾಯಕ ಸಂಪಾದಕನಾದ. ಜೀವನದ ಕೊನೆಗಾಲದ ತನಕವೂ ಈ ಪತ್ರಿಕೆಗೆ ಸಂಪಾದಕ ಹಾಗೂ ಪಾಲುಗಾರನಾಗಿದ್ದ. ಇವನ ಕಾಲದಲ್ಲಿ ಪತ್ರಿಕೆ ಒಳ್ಳೆಯ ಹೆಸರು ಮಾಡಿತು. ಪತ್ರಿಕೋದ್ಯಮಿಯಾಗಿದ್ದುಕೊಂಡು ಕಾವ್ಯ ರಚನೆ ಮುಂದುವರಿಸಿದನಾದರೂ ಅವು ಆರಂಭದ ರಚನೆಗಳಷ್ಟು ಹೆಸರು ಗಳಿಸಲಿಲ್ಲ. ಅಂದಿನ ಸಾಹಿತ್ಯವಲಯದಲ್ಲಿ ಸುಮಾರು ಅರ್ಧಶತಮಾನಕಾಲ ಅಮೆರಿಕದ ಪ್ರಮುಖ ಕವಿ ಎಂದು ಹೆಸರು ಗಳಿಸಿದ್ದ. 1878 ಜೂನ್ 12ರಂದು ನಿಧನಹೊಂದಿದ.					(ಎಂ.ಕೆ.ಎನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ